ತ್ರಿಪುರ 1 -
ತಾರಕಾಸುರನ ಮಕ್ಕಳಾದ ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಎಂಬ ಮೂವರಿಗೆ ಮಯ ಕ್ರಮವಾಗಿ ನಿರ್ಮಿಸಿ ಕೊಟ್ಟ ಮೂರು ಪುರಗಳು-ಸುವರ್ಣಪುರ, ರಜತಪುರ, ಅಯಸ್‍ಪುರ.

ತಾರಕಾಸುರನ ಸಂಹಾರವಾದ ಮೇಲೆ ಮಯ ಆತನ ಮಕ್ಕಳೊಡನೆ ಪ್ರಯಾಗದಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾದಾಗ ಅಮರತ್ವವನ್ನೂ ಯಾವ ದೇವತೆಗಳೂ ಭೇದಿಸಲಭೇದ್ಯವಾದ ಮೂರು ಪುರಗಳನ್ನು ನಿರ್ಮಿಸುವ ಸಾಮಥ್ರ್ಯವನ್ನೂ ತನಗೆ ಅನುಗ್ರಹಿಸಬೇಕಾಗಿ ಕೇಳಿಕೊಂಡ. ಆದರೆ ಬ್ರಹ್ಮ ಎರಡನೆಯ ವರವನ್ನು ಮಾತ್ರ ಅನುಗ್ರಹಿಸಿದ. ಅನಂತರ ಮಯ ಭೂಮಿಯ ಮೇಲೆ ಕಬ್ಬಿಣದ ಪಟ್ಟಣವನ್ನೂ ಅಂತರಿಕ್ಷದಲ್ಲಿ ಬೆಳ್ಳಿಯ ನಗರವನ್ನೂ ಅದರ ಮೇಲೆ ಸುವರ್ಣ ನಗರವನ್ನೂ ನಿರ್ಮಿಸಿ ತಾರಕನ ಮಕ್ಕಳಿಗೆ ಅವನ್ನು ಕೊಟ್ಟ.

ದೇವತೆಗಳ ತಂಟೆಗೆ ಹೋಗಬೇಡಿ-ಎಂದು ಎಚ್ಚರಿಸಿದ್ದ ಮಯನ ಮಾತುಗಳನ್ನು ಲಕ್ಷಿಸದ ತಾರಾಕ್ಷಾದಿಗಳು ಕಾಲು ಕೆರೆದು ದೇವತೆಗಳೊಡನೆ ಹೋರಾಡತೊಡಗಿದರು. ಇವರ ಉಪಟಳವನ್ನು ತಾಳಲಾರದೆ ದೇವತೆಗಳು ಈಶ್ವರನ ಮರೆಹೊಕ್ಕರು. ಆಗ ಈಶ್ವರ ಭೂಮಿಯನ್ನೇ ತನ್ನ ರಥವನ್ನಾಗಿಯೂ ಚರ್ಮವೇದಗಳನ್ನೇ ನಾಲ್ಕು ಕುದುರೆಗಳನ್ನಾಗಿಯೂ ಮಾಡಿಕೊಂಡು ಯುದ್ಧ ಸನ್ನದ್ಧನಾದ. ಬ್ರಹ್ಮ ಸಾರಥಿಯಾದ, ಮಂದರಪರ್ವತ ಬಿಲ್ಲಾದರೆ ಸಮುದ್ರ ಬತ್ತಳಿಕೆಯಾಯಿತು. ಆದಿಶೇಷನನ್ನು ಆ ಬಿಲ್ಲಿಗೆ ಹೆದೆಯಾಗಿ ಬಿಗಿದು ಶ್ರೀವಿಷ್ಣುವನ್ನೇ ಬಾಣವಾಗಿಸಿಕೊಂಡ ಈಶ್ವರ ಪುಷ್ಯನಕ್ಷತ್ರ ಯೋಗದಲ್ಲಿ ತ್ರಿಪುರಗಳೂ ಒಂದು ಸಾಲಿನಲ್ಲಿ ಬಂದ ಸುಸಂಧಿಯನ್ನು ಗಮನಿಸಿ ಒಂದೇ ಬಾಣದಿಂದ ಅವನನ್ನು ಭಸ್ಮ ಮಾಡಿ ತ್ರಿಪುರಾಂತಕ ಎನಿಸಿಕೊಂಡ.			(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ